ನಿಮ್ಮಯ ಹಕ್ಕಿ ಜೋಪಾನ!!
-ಇ.ಕೆ.ರಾಮಮೋಹನ
ನಮ್ಮಲ್ಲಿ ಹಿಂದೆ ಮಕ್ಕಳು ಆಡುತ್ತಿದ್ದ ಜನಪ್ರಿಯ ಆಟಗಳಲ್ಲಿ `ಕಣ್ಣಾಮುಚ್ಚೆ ಕಾಡೇಗೂಡೇ' ಸಹಾ ಒಂದು. ಬಹುಷಃ ಹೋಂವರ್ಕ್ ಮತ್ತು ಟ್ಯೂಷನ್ಗಳ ಜಂಜಡಕ್ಕೆ ಸಿಲುಕದ, ವಿಶೇಷತಃ ಗ್ರಾಮೀಣ ಭಾಗದ ಮಕ್ಕಳು ಈಗಲೂ ಈ ಆಟ ಆಡುತ್ತಾರೆ ಎಂದು ನಂಬಿದ್ದೇನೆ. ಈ ಆಟದಲ್ಲಿ ಅಜ್ಜಿ ಇತರರು ಅವಿತುಕೊಳ್ಳಲು ಅವಕಾಶ ಮಾಡಿಕೊಡುವ ಸಲುವಾಗಿ ಔಟ್ ಆಗಿರುವ ಆಟಗಾರನ ಕಣ್ಣು ಮುಚ್ಚಿ ಹಿಡಿದುಕಣ್ಣಾಮುಚ್ಚೇ ಕಾಡೇಗೂಡೇ
ಉದ್ದಿನಮೂಟೆ ಉರುಳೇಹೋಯ್ತು
ನಮ್ಮಯ ಹಕ್ಕಿ ಬಿಟ್ಟೇಬಿಟ್ಟೇ
ನಿಮ್ಮಯ ಹಕ್ಕಿ ಜೋಪಾನ
ಎಂದು ಹೇಳಿ ಇತರರನ್ನು ಹುಡುಕುವ ಸಲುವಾಗಿ ಕಣ್ಣು ಮುಚ್ಚಿ ಹಿಡಿದುಕೊಂಡಿದ್ದ ಆಟಗಾರನನ್ನು ಬಿಡುತ್ತಾಳೆ. ಈ ನಿಮ್ಮಯ ಹಕ್ಕಿ ಜೋಪಾನ ಎಂಬುದು ನನಗೆ ಹೊಳೆಯಲು ಕಾರಣ ಇನ್ನೆರಡು ವಾರಗಳಲ್ಲಿ ಆರಂಭವಾಗಲಿರುವ ವಿವಿಧ ತರಗತಿಗಳ ವಾರ್ಷಿಕ ಪರೀಕ್ಷೆಗಳು. ಅಂದ ಮೇಲೆ ನಿಮ್ಮಯ ಹಕ್ಕಿ ಜೋಪಾನ ಎಂಬ ಮಾತಿನ ಒಳಮರ್ಮ ನಿಮಗೆ ಅರ್ಥವಾಗಿರಬೇಕಲ್ಲವೇ?
ಹೌದು, ನಾನು ಹೇಳುತ್ತಿರುವುದು ನಿಮ್ಮ ಮಗುವಿನ ಬಗ್ಗೆ. ವಾರ್ಷಿಕ ಪರೀಕ್ಷೆಗಳೆಂದ ಕೂಡಲೇ ವಿದ್ಯಾರ್ಥಿಗಳಿಗೆ ಅಂಕಗಳಿಕೆಯ ತವಕ, ಪೋಷಕರಿಗೆ ತಮ್ಮ ಮಗು ಪರೀಕ್ಷೆಯಲ್ಲಿ ಹೇಗೆ ಮಾಡುವುದೋ ಎಂಬ ಆತಂಕ, ಶಿಕ್ಷಕರಿಗೆ ಎಲ್ಲರಿಗೂ `ಸರಿಹೊಂದುವ' ಪ್ರಶ್ನೆಪತ್ರಿಕೆಗಳನ್ನು ರೂಪಿಸುವ, ಪರೀಕ್ಷೆಗಳನ್ನು ನಡೆಸುವ, ಸಮಯಕ್ಕೆ ಸರಿಯಾಗಿ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸುವ ಧಾವಂತ.....
ಪರೀಕ್ಷೆ ಎಂದ ಕೂಡಲೇ ಬರೆಯಬೇಕಾಗಿರುವುದು ಮಗುವಾದ್ದರಿಂದ (ಇಲ್ಲಿ ನಾನು ಮಗು ಅಂದಾಗ ನರ್ಸರಿ ವಿಭಾಗದಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಎನ್ನುವ ಅರ್ಥದಲ್ಲಿ ಬಳಸುತ್ತಿದ್ದೇನೆ) ಅದರದೇ ಎಲ್ಲಾ ಜವಾಬ್ದಾರಿ ಎಂದುಕೊಳ್ಳುತ್ತೇವೆ. ಆದರೆ ನಿಮ್ಮ ಮಗುವಿಗೆ ಪರೀಕ್ಷೆ ಎಂದ ಕೂಡಲೇ ಆ ಪರೀಕ್ಷೆಗೆ ಸಂಬಂಧಿಸಿದಂತೆ ಪೋಷಕರ ಪಾಲೂ ಇದೆ ಎಂಬುದನ್ನು ಮರೆಯಬಾರದು. (ಈ ಲೇಖನದ ಗುರಿ ಪೋಷಕರಾದ್ದರಿಂದ ಶಿಕ್ಷಕರ ಪಾತ್ರದ ಬಗ್ಗೆ ನಾನು ಇಲ್ಲಿ ಬರೆಯುತ್ತಿಲ್ಲ)
ಪ್ರೋತ್ಸಾಹಿಸಿ
ನಿಮ್ಮ ಮಗು ಎಷ್ಟೇ ಚೆನ್ನಾಗಿ ಓದಿರಲಿ ಅಥವಾ ಓದದೆ ಇರಲಿ, ಪರೀಕ್ಷೆಯ ಸಮಯದಲ್ಲಿ ನಿಮ್ಮಿಂದ ಪ್ರೋತ್ಸಾಹದ ಮಾತುಗಳನ್ನು ಕೇಳಲು ಮಾತ್ರ ಬಯಸುತ್ತದೆ. ``ಸ್ಕೂಲ್ ಶುರುವಾದಾಗಲೇ ಬಡಕೊಂಡೆ ಓದುಓದು ಅಂತ. ಆಗ ನನ್ನ ಮಾತು ಕೇಳಲಿಲ್ಲ. ಈಗ ಅನುಭವಿಸು'' ಅಂತಲೋ ``ಜಿತವಾಗಿ ಕೂತ್ಕೊಂಡು ಓದಕ್ಕೇ ಬರಲ್ಲ. ಅದೇ ಅವನ್ನ ನೋಡಿ ಬುದ್ಧಿ ಕಲ್ತುಕೋ'' ಎಂದೋ ತಿರಸ್ಕಾರದ ಮಾತುಗಳನ್ನು ಮಾತ್ರ ಹೇಳಬೇಡಿ. ಮೊದಲಿಂದ ಮಗು ಓದಲಿಲ್ಲ ನಿಜ. ಆ ವಿಚಾರದ ಪೋಸ್ಟ್ಮಾರ್ಟಂ ಮಾಡುವುದರಿಂದ ಲಾಭವೇನೂ ಇಲ್ಲ,. ಬದಲಿಗೆ ನಷ್ಟವೇ ಹೆಚ್ಚು. ಆದ್ದರಿಂದ ಈಗಲೂ ಓದು. ತೊಂದರೆಯೇನೂ ಇಲ್ಲ ಎಂಬಂತಹ ಪ್ರೋತ್ಸಾಹದ ನುಡಿಗಳನ್ನು ಆಡಿ. ನನಗೆ ಒತ್ತಾಸೆಯಾಗಿ ನನ್ನ ಪೋಷಕರು ಇದ್ದಾರೆ ಎಂಬ ಧೈರ್ಯದ ಭಾವನೆ ಮಕ್ಕಳಲ್ಲಿ ಮೂಡಿಸಿ.
ಹೋಲಿಕೆ ಬೇಡ
ಎಲ್ಲ ಪೋಷಕರೂ ಮಾಡುವ ಮತ್ತೊಂದು ತಪ್ಪು ಎಂದರೆ ಮಕ್ಕಳನ್ನು ಇನ್ನೊಬ್ಬರ ಜೊತೆ ಹೋಲಿಸುವುದು. ಪ್ರತೀ ಮಗುವೂ ಸಹಾ ತನ್ನದೇ ಆದ ಪ್ಲಸ್ ಪಾಯಿಂಟ್ ಮತ್ತು ಮೈನಸ್ ಪಾಯಿಂಟ್ ಹೊಂದಿರುತ್ತದೆ. ``ಅವನು ಅಷ್ಟು ಓದ್ತಾನೆ, ಇವನು ಇಷ್ಟು ಓದ್ತಾನೆ. ಆದರೆ ನೀನು ಓದಲ್ಲ. ನಿಮ್ಮ ದೊಡ್ಡಪ್ಪ ಹಾಗೆ ಓದ್ತಾ ಇದ್ದರು, ನಿಮ್ಮ ಮಾವ ಹೇಗೆ ಓದ್ತಾ ಇದ್ದಾ ಗೊತ್ತಾ'' ಮೊದಲಾದ ಹೋಲಿಕೆ ಮಾತುಗಳು ಬೇಡ. ನಿಮ್ಮ ಮಾತುಗಳು ಯಾವಾಗಲೂ ``ನೀನು ಮನಸ್ಸು ಮಾಡಿದ್ರೆ ಅವನಿಗಿಂತ ಚೆನ್ನಾಗಿ ಇಂಪ್ರೂವ್ ಆಗಬಲ್ಲೆ'' ಎಂಬ ರೀತಿಯಲ್ಲಿ ಇರಲಿ.
ನಿಮ್ಮ ಸಮಯ ಕೊಡಿ
ಪ್ರತಿನಿತ್ಯವೂ ನಿಮ್ಮ ಮಗುವಿನ ಜೊತೆ ನೀವು ಸ್ವಲ್ಪ ಸಮಯವನ್ನು ಕಳೆಯಬೇಕು. ಇದರಿಂದಾಗಿ ನಿಮ್ಮನ್ನು ನಿಮ್ಮ ಮಗು, ನಿಮ್ಮ ಮಗುವನ್ನು ನೀವು ಅರ್ಥ ಮಾಡಿಕೊಳ್ಳಲು ಅವಕಾಶ ಆಗುತ್ತದೆ. ಆಗ ಜನರೇಷನ್ ಗ್ಯಾಪ್ನಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ಮಗು ಸಹಜವಾಗಿಯೇ ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುತ್ತದೆ. ಆದ್ದರಿಂದ ಮಗುವಿಗೆ ದೈರ್ಯ ತುಂಬುತ್ತಾ, ಪ್ರೋತ್ಸಾಹಿಸುತ್ತಾ ಮಗುವಿನ ಜೊತೆ ನಿಮ್ಮ ಸಮಯವನ್ನು ಕಳೆಯಿರಿ.
ಇವನ್ನು ಮರೆಯಬೇಡಿನಿಮ್ಮ ಮಗು ಪರೀಕ್ಷೆ ಮುಗಿಸಿ ಬಂದ ತಕ್ಷಣ ಪ್ರಶ್ನೆಪತ್ರಿಕೆ ತೆಗೆದುಕೊಂಡು ಇದಕ್ಕೇನು ಬರೆದೆ? ಇದರ ಉತ್ತರ ಏನು? ಮೊದಲಾಗಿ ಪ್ರಶ್ನೆಗಳ ಚಕ್ರವ್ಯೂಹದಲ್ಲಿ ಬಂಧಿಸಬೇಡಿ. ಸ್ವಲ್ಪ ಸಮಯದ ನಂತರ ``ಹೇಗೆ ಮಾಡಿದ್ದೀಯಾ'' ಎಂಬ ಪೀಠಿಕೆಯ ಮೂಲಕ ವಿಷಯ ತಿಳಿದುಕೊಳ್ಳಲು ಆರಂಭಿಸಿ. ಮಗುವಿನ ಗಮನ ನಾಳಿನ ಪರೀಕ್ಷಾ ಸಿದ್ಧತೆಯ ಕಡೆಗೆ ಹರಿಯುವಂತೆ ಮಾಡಿ.
ಪರೀಕ್ಷೆಯ ಸಮಯದಲ್ಲಿ ಮಗುವಿನ ಆರೋಗ್ಯ ಬಹಳ ಮುಖ್ಯ. ಆದ್ದರಿಂದ ಮಗು ಸಾಧ್ಯವಾದಷ್ಟೂ ಮನೆಯ ಆಹಾರವನ್ನೇ ಸ್ವೀಕರಿಸುವಂತೆ ನೋಡಿಕೊಳ್ಳಿ. ಸಮಯಕ್ಕೆ ಸರಿಯಾಗಿ ಆಹಾರ ಸ್ವೀಕರಿಸುವುದು, ಸಮಯಕ್ಕೆ ಸರಿಯಾಗಿ ನಿದ್ರಿಸುವುದು ಬಹಳ ಮುಖ್ಯ. ಪರೀಕ್ಷೆಯ ಸಮಯದಲ್ಲಿ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗಿ ಇರುವುದರಿಂದ ಸರಿಯಾಗಿ ಆಹಾರ ತೆಗೆದುಕೊಳ್ಳುವುದಿಲ್ಲ; ನಿದ್ರೆಗೆಟ್ಟು ಓದಲು ಹೋಗುತ್ತಾರೆ. ಆದರೆ ಇದರಿಂದ ಹೆಚ್ಚು ಅಂಕಗಳು ಬರುವ ಬದಲು ಬರುವ ಅಂಕಗಳೂ ಖೋತಾ ಆಗುವ ಸಾಧ್ಯತೆ ಇದೆ. ಅದ್ದರಿಂದ ಈ ಬಗ್ಗೆ ಗಮನ ಇರಲಿ. ಪರೀಕ್ಷೆಯ ಸಮಯದಲ್ಲಿ ಕನಿಷ್ಠ ಆರರಿಂದ ಏಳು ಘಂಟೆಗಳ ನಿದ್ರೆ ಅತ್ಯಾವಶ್ಯಕ.
ಜೋಪಾನ ಎನ್ನುತ್ತಾ ಇಷ್ಟೆಲ್ಲಾ ಮಾತುಗಳನ್ನು ಹೇಳಲು ಕಾರಣವೇನು ಗೊತ್ತೇ? ನಮ್ಮ ಮಕ್ಕಳು ಸೋಲನ್ನು ಸ್ವೀಕರಿಸಲು ಕಲಿತಿಲ್ಲ ಎಂಬ ಕಾರಣಕ್ಕಾಗಿ. ಸೋಲನ್ನು ಸ್ವವಿಮರ್ಶೆಗೆ, ಗೆಲುವಿಗೆ ಏಣಿ ಎಂದು ಭಾವಿಸುವ ಬದಲು ಮುಗಿದು ಹೋದ ಅವಕಾಶಗಳ ಮತ್ತು ತಮ್ಮ ಬದುಕಿನ ಕೊನೆ ಎಂದು ಅವರು ನಂಬುತ್ತಾರೆ. ಈಗಿನ ಮಾಹಿತಿ ಯುಗದಲ್ಲಿ ಮಕ್ಕಳಿಗೆ ಅವರ ವಯಸ್ಸಿಗೆ ತಿಳಿಯಬಾರದನ್ನೆಲ್ಲಾ ತಿಳಿಯುವ, ನೋಡಬಾರದ್ದನ್ನೆಲ್ಲಾ ನೋಡುವ ಅವಕಾಶ ಸಿಕ್ಕಿಬಿಟ್ಟಿದೆ. ಆದ್ದರಿಂದ ದುಡುಕಿ ಹೆಜ್ಜೆ ಇಟ್ಟು ಎಲ್ಲರನ್ನೂ ದುಃಖದ ಮಡುವಿಗೆ ತಳ್ಳಿಬಿಡುತ್ತಾರೆ. (ಸ್ಪಷ್ಟವಾಗಿ ಇದನ್ನು ಬರೆಯಲೂ ಆಗದಂತಹ ಕಾಲ ಇದು!)
ಆದ್ದರಿಂದಲೇ ನಿಮ್ಮಯ ಹಕ್ಕಿ ಜೋಪಾನ ಎಂದಿದ್ದು. ಅರ್ಥವಾಯಿತಲ್ಲವೇ?!
(ದಿನಾಂಕ ೦೩/೦೩/೨೦೧೪ರಂದು ಬರೆದ ಲೇಖನ)