ಒಳಗಿನ ತಿಳಿಯನು ಕಲಕದೆ ಬದುಕಿದ ಮೇಷ್ಟ್ರು
-ಇ.ಕೆ.ರಾಮಮೋಹನ
ಬಹುಕಾಲ ಅರಗಿಸಿಕೊಳ್ಳಲು ಸಾಧ್ಯವೇ ಆಗದ ಆಘಾತವನ್ನು ಶ್ರೀ ಜಿ.ಎಸ್.ಶಿವರುದ್ರಪ್ಪನವರ ಸಾವು ಸಾರಸ್ವತ ಲೋಕಕ್ಕೆ ನೀಡಿದೆ. ಹುಟ್ಟುಸಾವುಗಳು ಬದುಕಿನ ಸಹಜ ಪ್ರಕ್ರಿಯೆಗಳು ಎನ್ನುವುದು ದಿಟವಾದರೂ ಕೆಲವರ ಸಾವು ಏಕಾದರೂ ಸಂಭವಿಸಿತೋ ಎನಿಸಿ ವಿಷಾದ, ನೋವುಗಳನ್ನು ಹೃದಯದಲ್ಲಿ ಮಡುಗಟ್ಟಿಸಿ ಬಿಡುತ್ತದೆ. ಜೀಯೆಸ್ಸೆಸ್ ಅವರ ಸಾವೂ ಇಂತಹುದೇ.
ಸ್ವಾತಂತ್ರ್ಯ ಹೋರಾಟದಲ್ಲಿ ಹೆಸರು ಮಾಡಿದ ಈಸೂರಿನಲ್ಲಿ ಶಿಕ್ಷಕರಾಗಿದ್ದ ಗುಗ್ಗುರಿ ಶಾಂತವೀರಪ್ಪನವರ ಮಗನಾಗಿ ೧೯೨೬ರ ಫ಼ೆಬ್ರುವರಿ ೭ರಂದು ಜನಿಸಿದ ಜೀಯೆಸ್ಸೆಸ್ ಬೆಳೆದ ಎತ್ತರ, ಮೈಗೂಡಿಸಿಕೊಂಡ ಹೃದಯವಂತಿಕೆ, ತುಂಬಿಕೊಂಡ ಪ್ರೀತಿ, ಹರಿಸಿದ ವಾತ್ಸಲ್ಯ ಸುಧೆ, ಬೆಳೆಯಿಸಿದ ಶಿಷ್ಯಪರಂಪರೆ ಇವುಗಳ ಬಗ್ಗೆ ಪದಗಳಲ್ಲಿ ಕಟ್ಟಿಕೊಡಲು ಹೇಗೆ ಸಾಧ್ಯ!?
ಜೀಯೆಸ್ಸೆಸ್ ಅವರ ಬದುಕು, ಬರೆಹ, ವ್ಯಕ್ತಿತ್ವಗಳ ಬಗ್ಗೆ ನನ್ನಂತಹವನು ಬರೆಯುವುದೆಂದರೆ ಅದು ಪುಟ್ಟ ದೋಣಿಯಲ್ಲಿ ಕುಳಿತು ಸಮುದ್ರವನ್ನು ದಾಟಿಬಿಡುವೆ ಎಂಬ ರೀತಿಯ ಹುಂಬತನವಾಗುತ್ತದೆ. ಪ್ರಸ್ತುತ ಈಗ ನಾನು ಕನ್ನಡದ ಮೇಷ್ಟ್ರಪರಂಪರೆ ಹಾಗು ಅದರ ಸಮಕಾಲೀನ ಕೊಂಡಿಯಾಗಿ ಜೀಯೆಸ್ಸೆಸ್ ಅವರ ಬಗ್ಗೆ ದಾಖಲಿಸುವ ಯತ್ನ ಮಾಡುತ್ತಿದ್ದೇನೆ.
ನಮ್ಮ ಕನ್ನಡನಾಡಿನಲ್ಲಿ ಮೇಷ್ಟ್ರುಗಳ ಘನ ಪರಂಪರೆ ಒಂದು ಬೆಳೆದು ಬಂದಿದೆ. ಬಿ.ಎಂ.ಶ್ರೀ(ಬಿ.ಎಂ.ಶ್ರೀಕಂಠಯ್ಯ), ತೀ.ನಂ.ಶ್ರೀ(ತೀ.ನಂ.ಶ್ರೀಕಂಠಯ್ಯ), ಟಿ.ಎಸ್.ಎಸ್(ತಳುಕಿನ ವೆಂಕಣ್ಣಯ್ಯ), ರಾಜರತ್ನಂ, ಕುವೆಂಪು, ಟಿ.ಎಸ್.ವಿ.(ತ.ಸು.ಶಾಮರಾಯರು) ಎಂದೆಲ್ಲಾ ಆ ಪರಂಪರೆಯನ್ನು ಗುರುತಿಸುವಾಗ ಈ ಸರಪಣಿಯ ಸಮಕಾಲೀನ ಕೊಂಡಿಯಾಗಿದ್ದವರು ಜೀಯೆಸ್ಸೆಸ್.
ಸ್ವಾರಸ್ಯದ ಸಂಗತಿ ಎಂದರೆ ಈ ಮೇಲೆ ಹೇಳಿರುವ ಮೇಷ್ಟ್ರುಗಳನ್ನು ಅವರ ಪದನಾಮದ (ಡೆಸಿಗ್ನೇಷನ್) ಪ್ರಕಾರ ಪ್ರಾಧ್ಯಾಪಕ (ಪ್ರೊಫ಼ೆಸರ್) ಎಂದೇ ಸಂಬೋಧಿಸಬೇಕು. ಅದರೆ ಈ ಪ್ರೊಫ಼ೆಸರುಗಳೆಲ್ಲಾ ಮೇಷ್ಟ್ರು ಎಂಬುದಾಗಿಯೆ ತಮ್ಮ ಶಿಷ್ಯವಲಯದಲ್ಲಿ ಗಟ್ಟಿಯಾಗಿ ಉಳಿದುಕೊಂಡರು.
ಈ ಮೇಷ್ಟ್ರಗಳೆಲ್ಲಾ ಕನ್ನಡದ ಕಟ್ಟಾಳುಗಳು. ಪಂಪನಿಂದ ಹಿಡಿದು ಅವರ ಸಮಕಾಲೀನ ಕವಿಗಳವರೆಗಿನ ಸಾಹಿತ್ಯದ ಸೌಂದರ್ಯ, ವಿಚಾರಪರತೆ, ಅಭಿವ್ಯಕ್ತಿ, ವೈಲಕ್ಷಣ್ಯ ಮುಂತಾದ ವಿಚಾರಗಳನ್ನು ಗಮನಿಸಿ ಗುರುತಿಸಿ ವಿಶ್ಲೇಷಿಸಿ ವಿಮರ್ಶಿಸಿದವರು. ತಮ್ಮ ಶಿಷ್ಯರಿಗೂ ತಾವು ಸವಿದ ಸಾಹಿತ್ಯದ ರಸದೌತಣವನ್ನು ಮತ್ತಷ್ಟು ಚೆನ್ನಾಗಿ ಉಣಬಡಿಸಿ ಸಾಹಿತ್ಯ ಸಮಾರಾಧನೆ ನಡೆಸಲು ಈ ಶಿಷ್ಯರನ್ನು ಸಜ್ಜುಗೊಳಿಸಿದವರು.
ಇಂತಹ ಅನನ್ಯ ಮೇಷ್ಟ್ರ ಪರಂಪರೆಗೆ ಸೇರಿದವರು ಜೀಯೆಸ್ಸೆಸ್. ಇವರು ರಾಜರತ್ನಂ, ಕುವೆಂಪು, ತ.ಸು.ಶಾಮರಾಯರಂತಹ ಘಟಾನುಘಟಿಗಳ ಶಿಷ್ಯನಾಗಿ ಬೆಳೆದರು. ಈ ಮೇಷ್ಟ್ರ ಪರಂಪರೆಯ ಸತ್ವವನ್ನು ಹೀರಿಕೊಂಡು ಜೀಯೆಸ್ಸೆಸ್ ಮುಂದೆ ಸ್ವತಃ ತಾವೂ ಆ ಮೇಷ್ಟ್ರ ಪರಂಪರೆಯ ಮುಂದಿನ ಸಮರ್ಥ ಕೊಂಡಿ ಆದರು.
ಬೋಧಕರಾಗಿ ಜೀಯೆಸ್ಸೆಸ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇದ್ದುಕೊಂಡು ಮಾಡಿದ ಸಾಧನೆಗಳಂತೂ ಅದ್ಭುತ. ಅವೆಲ್ಲಕ್ಕಿಂತ ಅದ್ಭುವೆಂದರೆ ಅವರು ಅಲ್ಲಿ ಬೆಳೆಸಿದ ತರುಣರ ತಂಡ. ಡಾ|ಚಂದ್ರಶೇಖರ ಕಂಬಾರ, ಡಾ|ಚಿದಾನಂದಮೂರ್ತಿ, ಬರಗೂರು ರಾಮಚಂದ್ರಪ್ಪ, ಎನ್.ಎಸ್.ಲಕ್ಷ್ಮಿನಾರಾಯಣಭಟ್ಟ, ಡಿ.ಆರ್.ನಾಗರಾಜ, ನಾ.ಡಿಸೋಜ, ಎಚ್.ಎಸ್.ವೆಂಕಟೇಶಮೂರ್ತಿ ಮೊದಲಾಗಿ ಮುಂದೆ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ ಹಲವು ಪ್ರತಿಭೆಗಳನ್ನು ಜೀಯೆಸ್ಸೆಸ್ ಗುರುತಿಸಿ ಪೋಷಿಸಿದರು. ಹಿರಿಯ ವಿದ್ವಾಂಸರೂ, ಕನ್ನಡದ ಖ್ಯಾತ ಸಂಶೋಧಕರೂ ಆದ ಡಾ|ಚಿದಾನಂದಮೂರ್ತಿ ಅವರು ತಮೆಗೆ ಅಪಾರ ಆಸಕ್ತಿ ಇದ್ದ ಗಣಿತವನ್ನು ಕೈಬಿಟ್ಟು ಕನ್ನಡ ಆನರ್ಸ್ ಆರಿಸಿಕೊಂಡು ಓದಿದ್ದಕ್ಕೆ ಕಾರಣ ಜೀಯೆಸ್ಸೆಸ್ ಅವರು. ಹೀಗೆ ಕನ್ನಡ ಸಾರಸ್ವತ ನಂದನಕ್ಕೆ ಅದನ್ನು ಬೆಳೆಸಲೆಂದೇ ಜೀಯೆಸ್ಸೆಸ್ ಕೈಹಿಡಿದು ಕರೆತಂದುಬಿಟ್ಟವರು ಹಲವರು.
ಈ ಮೇಷ್ಟ್ರುಗಳ ಪರಂಪರೆಯ ಮೇಷ್ಟ್ರುಗಳು ತಮ್ಮ ವಿದ್ಯಾರ್ಥಿಗಳ ಭಾವಕೋಶದೊಳಗೆ ನೇರವಾಗಿ ಪ್ರವೇಶ ಗಿಟ್ಟಿಸಿಕೊಂಡು ಬಿಡುತ್ತಿದ್ದರು. ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದೇ ಭಾವಿಸಿ ಅಂತೆಯೇ ನಡೆದುಕೊಳ್ಳುತ್ತಿದ್ದರು. ಇದಕ್ಕೊಂದು ನಿದರ್ಶನ ಹಸಿವೆಯಿಂದ ಬಳಲಿದ್ದ ಜೀಯೆಸ್ಸೆಸ್ ಅವರನ್ನು ತ.ಸು.ಶಾಮರಾಯರು ತಾವೇ ಮಾತನಾಡಿಸಿ ಪರಿಚಯ ಮಾಡಿಕೊಂಡು ತಮ್ಮ ಮನೆಗೇ ಕರೆದುಕೊಂಡು ಹೋಗಿ ಊಟ ಹಾಕಿಸಿದ್ದು.
ನಂತರ ತಮ್ಮ ಶಿಷ್ಯನ ಬಡತನದ ಬಗ್ಗೆ ಅರಿತು ಅವರು ಶ್ರೀಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಹೇಳಿ ಅವರ ಹಾಸ್ಟೆಲ್ನಲ್ಲಿ ಜೀಯೆಸ್ಸೆಸ್ ಅವರಿಗೆ ಅವಕಾಶ ನೀಡಲು ಕೋರಿದರು. ಆಗ ಶ್ರೀಗಳವರು ಬ್ರಾಹ್ಮಣರಾದ ನಿಮಗೆ ಈ ಲಿಂಗಾಯಿತ ಹುಡುಗನಲ್ಲಿ ಏಕೆ ಇಷ್ಟು ಆಸಕ್ತಿ ಎಂದು ತಮಾಷೆ ಮಾಡಿದರಂತೆ. ಆಗ ಶಾಮರಾಯರು ಇವನು ನನ್ನ ವಿದ್ಯಾರ್ಥಿ. ನನ್ನ ವಿದ್ಯಾರ್ಥಿಗಳು ನನ್ನ ಮಕ್ಕಳು. ಅವರು ಯಾವ ಜಾತಿಗೂ ಸೇರಿದವರಲ್ಲ. ಅವರದು ವಿದ್ಯಾರ್ಥಿಗಳ ಜಾತಿ. ನಾನು ಅವರ ಗುರು ಎಂದು ಉತ್ತರಿಸಿದರು. ವೈಯುಕ್ತಿಕ ಕಾರಣಕ್ಕಾಗಿ ಎಂದೂ ಬರದ ಶಾಮರಾಯರು ಬಂದು ಹೇಳಿದ್ದರಿಂದ ಹಾಸ್ಟೆಲ್ನಲ್ಲಿ ಜೀಯೆಸ್ಸೆಸ್ ಅವರಿಗೆ ಪ್ರವೇಶ ಸಿಕ್ಕಿತು. ವಿದ್ಯಾಭ್ಯಾಸದ ಹಾದಿ ಸುಗಮವಾಯಿತು. ತಾವು ಬರೆದ ಕವನಗಳನ್ನು ಓದಿ ವಿಮರ್ಶಿಸಿ ಪ್ರೋತ್ಸಾಹಿಸಿದ ತಮ್ಮ ಮೇಷ್ಟ್ರು ತ.ಸು.ಶಾಮರಾಯರ ಮಾತೃವಾತ್ಸಲ್ಯಕ್ಕೆ ಕೃತಜ್ಞತೆಯಾಗಿ ಧುಮ್ಮಿಕ್ಕಿ ಬಂದ ಜೀಯೆಸ್ಸೆಸ್ ಹೃದಯದ ಹಾಡೇ
ಎದೆತುಂಬಿಹಾಡಿದೆನು ಅಂದುನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು ಎಂಬ ಕವನ.
ನಮ್ಮ ಕನ್ನಡನಾಡಿನ ಮೇಷ್ಟ್ರ ಪರಂಪರೆಯ ಸಹಜ ಉತ್ತರಾಧಿಕಾರಿಗಳಾದ ಜೀಯೆಸ್ಸೆಸ್ ತಾವೂ ಸಹಾ ಅನೇಕ ಯುವಕವಿಗಳ ಸಾಹಿತ್ಯ ಕೃಷಿಯನ್ನು ಓದಿ, ಕೇಳಿ ಪ್ರೋತ್ಸಾಹಿಸಿ ಬೆಳೆಸಿದವರು. ಪ್ರಗತಿಶೀಲ, ನವ್ಯ, ಬಂಡಾಯ ಮೊದಲಾಗಿ ಹಲವು ಪಂಥಗಳಿಂದ ಬಂದವರೂ, ಹಲವು ಪಥಗಳಿಗೆ ಒಲಿದವರು ಅವರ ಶಿಷ್ಯ ಪರಂಪರೆಯಲ್ಲಿ ಇದ್ದಾರೆ ಎನುವುದು ನಿಜಕ್ಕು ಬೆರಗು ಹುಟ್ಟಿಸುವ ಕೌತುಕದ ಸಂಗತಿ.
ಜೀಯೆಸ್ಸೆಸ್ ಅವರ ಕವನಗಳು ದೀಪಧಾರಿಗಳು. ಅಂದರೆ ನಮ್ಮ ಬದುಕಿನ ದಾರಿಗೆ ಬೆಳಕು ತೋರಬಲ್ಲವು. ಅವರ `ಎಲ್ಲೋ ಹುಡುಕಿದೆ' ಕವನದ ಈ ಸಾಲುಗಳನ್ನು ಗಮನಿಸಿ:
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟುಕಷ್ಟವೊ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ
ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇದೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಿಗೆಗೆ
ಅಹಂಕಾರದ ಕೋಟೆಯಿಂದ ಹೊರಬಂದರೆ ಇನ್ನು ಅನಂತವೇ ನಮಗೆ ಎಲ್ಲೆ! ಸುಖದುಃಖಗಳ ಪರಿಕಲ್ಪನೆ ಅಥವಾ ಅನುಭೂತಿ ಮೂಲತಃ ಇರುವುದು ನಮ್ಮ ಮನದಲ್ಲೇ! ನಮ್ಮೊಳಗಿನ ತಿಳಿಯನು ಕಲಕಿ ಅದಕ್ಕೊಂದಿಷ್ಟು ದ್ವೇಷ, ಹೊಟ್ಟೆಕಿಚ್ಚು, ಅಸಹನೆ ಮೊದಲಾದ ಕಸ ಸೇರಿಸಿ ಬಗ್ಗಡ ಮಾಡಿಕೊಳ್ಳುವ ಬದಲು ಮನಸ್ಸನ್ನು ಕಲಕದೆ ಹಾಗೆ ತಿಳಿಯಾಗಿರಲು ಬಿಟ್ಟರೆ ಬದುಕು ಅದೆಷ್ಟು ಸುಂದರ ಸಹ್ಯವೆನಿಸುತ್ತದೆ ಅಲ್ಲವೇ!
ಇಂತಹ ಅಮೃತೋಪಮವಾದ ಮಾತುಗಳನ್ನು ಆಡಿದ, ಆಡಬಲ್ಲ ಶಿಷ್ಯರನ್ನು ಬೆಳೆಸಿದ ಜೀಯೆಸ್ಸೆಸ್ ಮೇಷ್ಟ್ರು ಇನ್ನಿಲ್ಲ. ಜೀಯೆಸ್ಸೆಸ್ ಅವರ ಹಾಗೆ ನಾವೂ ಒಳಗಿನ ತಿಳಿಯನು ಕಲಕದೇ ಬದುಕಲು ಈ ಮೇಷ್ಟ್ರ ಪರಂಪರೆಯ ಕೊಂಡಿಗಳು ಕಳಚಿ ಹೋಗದೇ ಇಂತಹ ಮೇಷ್ಟ್ರುಗಳು ನಿರಂತರವಾಗಿ ಇರಲಿ ಎಂದು ಮನಸ್ಸು ಹಾರೈಸುತ್ತಿದೆ.
No comments:
Post a Comment