Thursday, 4 December 2014

ಕೃಷಿತೊ ನಾಸ್ತಿ ದುರ್ಭಿಕ್ಷಂ
-ಇ.ಕೆ.ರಾಮಮೋಹನ
ಬೆಳಗಾವಿಯ ಸುವರ್ಣಸೌಧದಲ್ಲಿ ಈ ಬಾರಿ ಆರಂಭಗೊಂಡಿರುವ ವಿಧಾನಮಂಡಲದ ಅಧಿವೇಶನ ಹಲವು ಕಾರಣಗಳಿಂದ ಸುದ್ದಿ ಮಾಡುತ್ತಿದೆ.  ಸಚಿವ ಅನಿಲ್‌ಲಾಡ್  ತಪ್ಪೇ ಮಾಡಿಲ್ಲ ಎಂದು ಹೇಳುತ್ತಲೇ ಬಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿವೇಶನ ಆರಂಭಗೊಳ್ಳುವ ಕೊನೆನಿಮಿಷದಲ್ಲಿ ಅವರಿಂದ ರಾಜೀನಾಮೆ ಪಡೆದದ್ದು, ಈ ಸಂದರ್ಭದಲ್ಲಿ ಅನಿಲ್‌ಲಾಡ್ ಅವರು ಪಕ್ಷಕ್ಕಾಗಿ ತಾವು ಅನಿವಾರ್ಯವಾಗಿ ಹುತಾತ್ಮರಾಗುತ್ತಿರುವ ರೀತಿ ಪೋಸು ಕೊಟ್ಟಿದ್ದು ರಾಜ್ಯ ರಾಜಕಾರಣದ ಪ್ರಹಸನ ಪ್ರಸಂಗದ ನೂತನ ಅಧ್ಯಾಯವಾಗಿ ಲೋಕಾರ್ಪಣೆಗೊಂಡಿತು!  ಶಾದಿಭಾಗ್ಯ ಅಲಿಯಾಸ್ ಬಿದಾಯಿ ಯೋಜನೆಯನ್ನು ಸಮಾಜದ ಎಲ್ಲಾ ದುರ್ಬಲವರ್ಗದವರಿಗೂ ವಿಸ್ತರಿಸುವಂತೆ ಮಾಜಿಮುಖ್ಯಮಂತ್ರಿಗಳಾದ  ಯಡಿಯೂರಪ್ಪನವರು ಸದನದಲ್ಲಿ ಆರಂಭಿಸಿದ ಧರಣಿ, ಈ ಸಮಯದಲ್ಲಿ ಯಡಿಯೂರಪ್ಪನವರೇ ತಮ್ಮ ನಾಯಕರು ಎಂಬಂತೆ ಆಗಾಗ ಭಾಜಪದ ಸದಸ್ಯರು ವರ್ತಿಸಿದ ರೀತಿ, ಸದನದಲ್ಲಿ ನಡೆದ ವಾಗ್ಯುದ್ಧ, ಜೆಡಿ‌ಎಸ್‌ನವರು ಆಗಾಗ ಆಡಳಿತಪಕ್ಷದ ಕಡೆಗೆ ವಾಲಿದವರಂತೆ ಕಂಡು ಬಂದಿದ್ದು-ಹೀಗೆ ಹಲವು ಕಾರಣಗಳಿಗಾಗಿ ಈ ಅಧಿವೇಶನ ಸುದ್ದಿಯಲ್ಲಿದೆ.
ಆದರೆ ಈ ಸಮಯದಲ್ಲಿ ವಿಠಲ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ದುರಂತ ಪ್ರಕರಣ ಮಾತ್ರ ಬಹಳ ವಿಷಾದನೀಯ.  ಈ ಘಟನೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಣಕಿಸುವಂತದ್ದು ಎಂದರೆ ಉತ್ಪ್ರೇಕ್ಷೆಯಾಗಲಾರದು.  ಸದನದ ಒಳಗಡೆ ಜನಸೇವಕರು ಜನರ ಒಳಿತಿಗಾಗಿ ಚರ್ಚಿಸಲು ಸೇರಿದ್ದರೆ, ಹೊರಗಡೆ ಪ್ರಭುಗಳು ಅರ್ಥಾತ್ ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದರು.  ಕಬ್ಬಿನ ಬೆಲೆ ನಿಗದಿಗೊಳಿಸುವಲ್ಲಿ ಸರ್ಕಾರದ ಜಡತ್ವವನ್ನು, ಅನಿಚ್ಛೆಯನ್ನು ಪ್ರತಿಭಟಿಸಿ ರೈತರು ಧರಣಿ ನಡೆಸುತ್ತಿದ್ದರು.  ದುರಂತ ಎಂದರೆ ರೈತಾಪಿ ವರ್ಗದಿಂದ, ರೈತ ಕುಟುಂಬದಿಂದ ಬಂದ ಮುಖ್ಯಮಂತ್ರಿ ಅರ್ಥಾತ್ ನಾಡಿನದೊರೆ ಸಿದ್ಧರಾಮಯ್ಯನವರು ಕರ್ತವ್ಯ ದೃಷ್ಟಿಯಿಂದಾಗಲೀ ಅಥವಾ ಸೌಜನ್ಯಕ್ಕಾಗಿ ಆಗಲೀ ರೈತರ ಬಳಿ ತೆರಳಿ ಮಾತನಾಡಿಸಲಿಲ್ಲ.  ಮುಖ್ಯಮಂತ್ರಿಯಾದವರಿಗೆ ಕಡಿದುಕಟ್ಟೆ ಹಾಕುವಷ್ಟು ಕೆಲಸ ಇರುತ್ತದೆ ಎಂದಾದರೆ ಅವರ ಸಂಪುಟದ ಹಿರಿಯ ಸಹೋದ್ಯೋಗಿಗಳನ್ನಾದರೂ ರೈತರೊಡನೆ ಮಾತನಾಡುವಂತೆ ಕಳುಹಿಸಬಹುದಾಗಿತ್ತು.  ಆದರೆ ಇಂತಹುದೇನೂ ನಡೆಯಲಿಲ್ಲ.  ಬಡರೈತನೊಬ್ಬನ ಆತ್ಮಹತ್ಯೆ ಸಂಭವಿಸುತ್ತಿದ್ದಂತೆಯೇ ಸರ್ಕಾರ ಕೆಲವು ಕ್ರಮಗಳನ್ನು ಪ್ರಕಟಿಸಿತು.  ಇದನ್ನೇ ಒಂದೆರಡು ದಿನಗಳ ಮೊದಲಾದರೂ ಪ್ರಕಟಿಸಿದ್ದರೆ ಬಡಪಾಯಿ ರೈತನೊಬ್ಬನ ಅಮೂಲ್ಯ ಜೀವವಾದರೂ ಉಳಿಯುತ್ತಿತ್ತಲ್ಲವೇ?
ಕಬ್ಬಿನ ಬೆಳೆಗಾರರು ಕಳೆದ ಮೂರು ವರ್ಷಗಳಿಂದಲೂ ಕಬ್ಬಿಗೆ ಸೂಕ್ತ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.  ಆದರೆ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಸ್ವತಂತ್ರಭಾರತದ ಬಹುತೇಕ ಸರ್ಕಾರಗಳ ಪಾಲಿಸಿ ಆಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.  ರೈತರ ಹೋರಾಟಗಳಿಗಿಂತ ಉದ್ಯಮಿಗಳ, ಕಾರ್ಖಾನೆಗಳ ಮಾಲೀಕರ ಲಾಬಿ ಸರ್ಕಾರವನ್ನು ಸುಲಭವಾಗಿ ಮಣಿಸುತ್ತದೆ ಎಂಬುದು ಐತಿಹಾಸಿಕ ಸತ್ಯ.  ಏಕೆಂದರೆ ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚವೇ ಮೊದಲಾದ `ಖರ್ಚುವೆಚ್ಚ'ಗಳಿಗೆ ಉದಾರ ವಂತಿಗೆ ನೀಡುವ ತಾಕತ್ತು ಭಾರತದ ಬಡ ರೈತನಿಗೆ ಇಲ್ಲವಲ್ಲ!  ಬಹುತೇಕ ರಾಜ್ಯದ ಸಕ್ಕರೆ ಕಾರ್ಖಾನೆಗಳ ಮಾಲಿಕರು ಹಾಲಿ ಅಥವಾ ಮಾಜಿ ಪ್ರೊಫ಼ೆಷನಲ್ ರಾಜಕಾರಣಿಗಳೇ ಆಗಿದ್ದಾರೆ ಎಂಬುದು ಗಮನಾರ್ಹ ಸಂಗತಿ.
ಹಸಿರುಕ್ರಾಂತಿಯ ಹೆಸರಿನಲ್ಲಿ ಭಾರತದ ಪಾರಂಪರಿಕ ಕೃಷಿವಿಜ್ಞಾನವನ್ನು ಹೀಗೆಳೆದು ನಾಶಪಡಿಸಲಾಯಿತು.  ಹೈಬ್ರಿಡ್ ಅವಾಂತರದಲ್ಲಿ ಅದೆಷ್ಟೋ ದೇಸೀ ತಳಿಗಳಿಗೆ ಎಳ್ಳುನೀರು ಬಿಟ್ಟಿದ್ದಾಯಿತು.  ಗೋವನ್ನು ಸಂಪತ್ತು ಎಂದು ಭಾವಿಸಿದ ಈ ದೇಶದಲ್ಲಿ ಹೈಟೆಕ್ ಕಸಾಯಿಖಾನೆಗಳನ್ನು ಸ್ಥಾಪಿಸಿ ಗೋಮಾಂಸವನ್ನು ವಿದೇಶಕ್ಕೆ ರಫ಼್ತು ಮಾಡುವ ಯೋಜನೆಗಳನ್ನು ಜಾರಿಗೊಳಿಸಿದ್ದಾಯ್ತು.  ವಿದ್ಯುತ್ ಕೊಡದೆ ಪಂಪ್‌ಸೆಟ್ ಕೊಟ್ಟಿದ್ದಾಯ್ತು.  ಬಿತ್ತನೆಬೀಜ, ಗೊಬ್ಬರ ಕೊಡದೆ ಸತಾಯಿಸಿದ್ದಾಯಿತು.  ಬವಣೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಾಗ ಮೊಸಳೆ ಕಣ್ಣಿರು ಸುರಿಸಿದ್ದಾಯಿತು.  ``ಬೇಸಾಯ; ಮನೆಮಂದಿ ಸಾಯ'' ಎಂಬ ಮಾತನ್ನು ನಿಜವಾಗಿಸಲು ಸರ್ಕಾಗಳು ಪಣ ತೊಟ್ಟಂತೆ ದುಡಿಯುತ್ತಿರುವಾಗ ಇನ್ನು ಬಾಕಿ ಇರುವುದಾದರೂ ಏನು?
ಸರ್ಕಾರಗಳಿರಲಿ, ವಿದ್ಯಾವಂತರೆನಿಸಿಕೊಂಡವರಾದರೂ ಮಾಡುತ್ತಿರುವುದು ಏನು?  ಅನ್ನದಾತನಾದ ರೈತನ ವಿಚಾರದಲ್ಲಿ ಬಹುತೇಕರಿಗೆ ಅಸಡ್ಡೆ.  ಯಾರೋ ರೈತ ಆತ್ಮಹತ್ಯೆ ಮಾಡಿಕೊಂಡನಂತೆ.  ಈ ರೈತರಿಗೆ ಇನ್ನೇನು ಕೆಲಸ ಎಂದು ಅಸಡ್ಡೆ ತೋರುವ ನಾವು ಬೆಂಗಳೂರಿನಲ್ಲಿ ಯಾರೋ ಟೆಕ್ಕಿ ಆತ್ಮಹತ್ಯೆ ಎಂಬ ಸುದ್ದಿಯನ್ನು ಏಕಾಗ್ರವಾಗಿ ಓದುತ್ತೇವೆ.  ಸಾಲ ವಿನಾಯಿತಿ ಘೋಷಿಸಿ ಎಂಬ ರೈತರ ಬೇಡಿಕೆ ಸುದ್ದಿ ಓದಿ ಮೂಗು ಮುರಿಯುವ ನಾವು ದೊಡ್ಡದೊಡ್ಡ ಉದ್ದಿಮೆಗಳಿಗೆ ಟ್ಯಾಕ್ಸ್ ಹಾಲಿಡೇ ರೂಪದಲ್ಲಿ, ಬೇರೆಬೇರೆ ಸವಲತ್ತುಗಳ ರೂಪದಲ್ಲಿ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಕೊಡಮಾಡಿದ ಸುದ್ದಿ ಓದಿ ಮೆಚ್ಚಿಕೊಳ್ಳುತ್ತೇವೆ.  ರೈತನು ತಾನು ಸಾಲಸೋಲ ಮಾಡಿ, ಕಷ್ಟಪಟ್ಟು  ಬೆಳೆದ ಬೆಳೆಗೆ ಸರಿಯಾದ ಬೆಳೆ ನೀಡಿ ಎಂದು ಕೇಳಿದರೆ ನಮಗೆ ಕೋಪ ಬರುತ್ತದೆ.  ಆದರೆ ನಮಗೆ ಮಾತ್ರ ವರ್ಷವರ್ಷವೂ ಸಂಬಳ ೨೦% ಆದರೂ ಜಾಸ್ತಿ ಆಗಲೇಬೇಕು.
ಶಾದಿಭಾಗ್ಯ, ಅಹಿಂದ ಟೂರ್‌ನಂತಹ ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ದವಿರುವ ಸರ್ಕಾರ, ರೈತರಿಗಾಗಿ ಬೆಂಬಲಬೆಲೆ ಘೋಷಿಸಲು ಅಯ್ಯೋ ತುಂಬಾ ದುಡ್ಡು ಖರ್ಚಾಗುತ್ತದಲ್ಲಾ ಎಂದು ಪೋಸು ಕೊಡುತ್ತದೆ.   ರೈತರು ವಾಸವಾಗಿರುವ ಹಳ್ಳಿಗಳ ರಸ್ತೆ ಎಕ್ಕುಟ್ಟಿ ಹೋದರೂ ನಮ್ಮ ಸರ್ಕಾರಗಳು ಕೇರ್ ಮಾಡುವುದಿಲ್ಲ.  ಆದರೆ ಬೆಂಗಳೂರಿನ ಯಾವುದೋ ಕೆಲವು ರಸ್ತೆಗಳು ಸರಿಯಿಲ್ಲ ಎಂದು ಉದ್ಯಮಿಗಳು ನಿಟ್ಟುಸಿರಿಟ್ಟ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ನಮ್ಮ ಸರ್ಕಾರಗಳು ದುಃಸ್ವಪ್ನ ಕಂಡವರಂತೆ ದಡಬಡಿಸಿ ಎದ್ದು ಕೂರುತ್ತವೆ.  ಮುಖ್ಯಮಂತ್ರಿಗಳೇ ಖುದ್ದಾಗಿ ಉದ್ಯಮಿಗಳಿಗೆ ಫ಼ೋನ್ ಮಾಡಿ ಸಮಸ್ಯೆ ಬಗ್ಗೆ ಬೇಜಾರು ಮಾಡಿಕೊಳ್ಳಬೇಡಿ.  ಪರಿಹಾರದ ಬಗ್ಗೆ ಟೀ ಕುಡಿಯುತ್ತಾಚರ್ಚಿಸೋಣ ಬನ್ನಿ ಕರೆಯುತ್ತಾರೆ.

ಏಕೆ ಇಂತಹ ದ್ವಂದ್ವನೀತಿ?  ರೈತನು ಬೆಳೆ ಬೆಳೆಯದಿದ್ದರೆ ನಾವು ಬದುಕಲು ಸಾಧ್ಯವಿಲ್ಲ ಎಂಬ ಕನಿಷ್ಠ ವಿವೇಕವೂ ಮರೆಯಾಗುತ್ತಿದೆಯಲ್ಲ?  ಕಾರ್ಖಾನೆಗಳ ಸ್ಥಾಪನೆಗೆ, ಮೂಲಭೂತ ಸೌಲಭ್ಯಗಳಿಗೆ ಎಂದು ಪ್ರತಿವರ್ಷವೂ ಸಾವಿರಾರು ಎಕರೆ ಜಮೀನು ಗುಳುಂ ಮಾಡುತ್ತಿರುವ ನಮಗೆ ಈ ಜಮೀನಿನಲ್ಲಿ ಬೆಳೆಯಬಹುದಾಗಿದ್ದ ಬೆಳೆಯ ಪ್ರಮಾಣ ಅಷ್ಟರಮಟ್ಟಿಗೆ ಕಡಿಮೆಯಾಯಿತಲ್ಲ ಎಂಬ ಆತಂಕವೇ ಉಂಟಾಗುವುದಿಲ್ಲ.
ಆದರೆ ಭಾರತದ ಬೆನ್ನೆಲುಬು ಕೃಷಿಯೇ ಎಂಬುದನ್ನು ಆರ್ಥಿಕ ತಜ್ಞರೂ ಒಪ್ಪುತ್ತಾರೆ.  ಕೃಷಿಯನ್ನು ಸಹಾ ಒಂದು ಉದ್ದಿಮೆ (ಇಂಡಸ್ಟ್ರಿ) ಎಂದು ಪರಿಗಣಿಸಿ ಕಾರ್ಯಪ್ರವೃತ್ತರಾದಾಗ, ಅನ್ನದಾತನಿಗೆ ಸಲ್ಲಬೇಕಾದ ಸವಲತ್ತು ಸೌಕರ್ಯಗಳು ಸಿಕ್ಕಾಗಲಷ್ಟೇ ನಮ್ಮ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ.  ಆದ್ದರಿಂದಲೇ ದೂರದೃಷ್ಟಿ ಉಳ್ಳ ನಮ್ಮ ಪೂರ್ವಜರು ಕೃಷಿತೊ ನಾಸ್ತಿ ದುರ್ಭಿಕ್ಷಂ ಎಂದು ಘಂಟಾಘೋಷವಾಗಿ ಸಾರಿದ್ದು!

No comments:

Post a Comment