Thursday, 4 December 2014

ಹೀಗೊಬ್ಬ ರಾಜನ ಕಥೆ!
-ಇ.ಕೆ.ರಾಮಮೋಹನ
ಹೀಗೊಂದೂರು. ಅಲ್ಲಿ ಒಬ್ಬ ರಾಜ.  ಅವನಿಗೊಂದು ಸಮಸ್ಯೆ. ಸರಿಯಾಗಿ ಆಹಾರ ಸೇರಲೊಲ್ಲದು;  ಮಲಗಿದರೆ ನಿದ್ರೆ ಹತ್ತಲೊಲ್ಲದು.  ಹಕೀಮರಾಯಿತು, ಪಂಡಿತರಾಯಿತು, ಸಿಕ್ಕಸಿಕ್ಕವರೆಲ್ಲರಿಂದ ಔಷಧ ಪ್ರಯೋಗವಾಯಿತು.  ಆದರೆ ಏನೂ ಪ್ರಯೋಜನವಾಗಲಿಲ್ಲ.  ಕೊನೆಗೊಬ್ಬ ವೃದ್ಧಸನ್ಯಾಸಿ ಬಂದರು.  ರಾಜನ ಸಮಸ್ಯೆಗೆ ತನ್ನ ಬಳಿ ಪರಿಹಾರ ಇದೆ ಎಂದರು.  ರಾಜನಿಗೆ ಪಾಪವೊಂದು ಅಂಟಿಕೊಂಡಿದ್ದು ಅದರಿಂದಾಗಿ ನಿದ್ರೆ ಬರುತ್ತಿಲ್ಲ.  ಆ ಪಾಪ ಪರಿಹಾರವಾಗಲು ರಾಜನು ವ್ರತವೊಂದನ್ನು ಮಾಡಬೇಕು.  ಆದರೆ ಅದನ್ನು ಕಾಡಿನಲ್ಲಿ ಇರುವ ತನ್ನ ಆಶ್ರಮದಲ್ಲೇ ಮಾಡಬೇಕು.  ಆದ್ದರಿಂದ ವಾರವೊಂದರ ಮಟ್ಟಿಗೆ ರಾಜನೊಬ್ಬನೇ ತನ್ನೊಡನೆ ಆಶ್ರಮಕ್ಕೆ ಬರಬೇಕು ಎಂದರು.  ರಾಜ ಸಂತೋಷದಿಂದ ಒಪ್ಪಿದ.
ರಾಜನ ಪ್ರಯಾಣಕ್ಕಾಗಿ ಸಿದ್ಧತೆಗಳು ಆರಂಭವಾದವು.  ಆಶ್ರಮದಲ್ಲಿ ರಾಜನಿಗೆ ತಿನ್ನಲು, ಕೂರಲು, ಮಲಗಲು ಮೊದಲಾಗಿ ಎಲ್ಲದಕ್ಕೂ ಬೇಕಾದ ಸಾಮಾನುಸರಂಜಾಮುಗಳು ಸಿದ್ಧಗೊಳ್ಳತೊಡಗಿದವು.  ಆದರೆ ಸನ್ಯಾಸಿ ಇದಾವುದೂ ತನ್ನ ಆಶ್ರಮದ ಬಳಿಯೂ ಸುಳಿಯುವಂತಿಲ್ಲ ಎಂದು ಖಡಾಖಂಡಿತವಾಗಿ ನುಡಿದುಬಿಟ್ಟರು.
ಅಂತೂ ಆಶ್ರಮ ಸೇರಿದ್ದಾಯಿತು.  ತಲುಪುವ ಹೊತ್ತಿಗೇ ಸಂಜೆಯಾಗಿತ್ತು.  ರುಚಿರುಚಿಯಾದ ವಿವಿಧ ಬಗೆಯ ಭಕ್ಷ್ಯಭೋಜ್ಯಗಳನ್ನು ತಿಂದು ರೂಢಿಯಾಗಿದ್ದ ರಾಜನಿಗೆ ಹಾಲು, ಹಣ್ಣು, ಕಂದಮೂಲಗಳು ಸೇರಲಿಲ್ಲ.  ಬಲವಂತವಾಗಿ ತಿಂದ ಶಾಸ್ತ್ರ ಮುಗಿಸಿ ಮಲಗಲು ಪರ್ಣಕುಟೀರವೊಂದಕ್ಕೆ ತೆರಳಿದ.  ಅಲ್ಲಿ ಸಗಣಿ ಹಾಕಿ ಸಾರಿಸಿದ ಮಣ್ಣಿನ ನೆಲ.  ಕಂಬಳಿಯೊಂದರ ಮೇಲೆ ಹಾಸಿದ ಕೃಷ್ಣಾಜಿನವೇ (ಹದಗೊಳಿಸಿದ ಜಿಂಕೆಯ ಚರ್ಮ) ಮಲಗಲು ಹಾಸಿಗೆ.  ಹಂಸತೂಲಿಕಾ ತಲ್ಪದ ಮೇಲೆ ಮಲಗಿದರೂ ಬಾರದ ನಿದ್ದೆ ಇಲ್ಲಿ ರಾಜನಿಗೆ  ಹೇಗೆ ಬಂದೀತು?  ಹಾಗೆ ಹೀಗೆ ಹೊರಳಾಡಿ ಕಾಲ ಕಳೆದ.  ಮರುದಿನ ಬೆಳಿಗ್ಗೆ ಸಿದ್ಧನಾದ ರಾಜನನ್ನು ಸನ್ಯಾಸಿ ತನ್ನೊಡನೆ ಕಾಡಿಗೆ ಬರುವಂತೆ ಕರೆದರು.  ಮುಂದೆ ಮಾಡಬೇಕಾದ ಹೋಮಕ್ಕಾಗಿ ಸಮಿತ್ತು, ದರ್ಭೆ ಮೊದಲಾದ ಕೆಲವು ಪದಾರ್ಥಗಳನ್ನು ತರಬೇಕಾಗಿದೆ ಎಂದರು.
ಹೀಗೆಯೇ ಎರಡು ದಿನಗಳು ಕಳೆದವು.  ಮೂರನೆಯ ದಿನ ಸನ್ಯಾಸಿ ಕಾಡಿಗೆ ಹೋಗುವ ಅವಶ್ಯಕತೆ ಇಲ್ಲವೆಂದು ಹೇಳಿದರು.  ಆದರೆ ಆಶ್ರಮದ ಸಮೀಪದ ಜಾಗವೊಂದನ್ನು ತೋರಿಸಿ ಈ ಜಾಗದಲ್ಲಿಯೇ ಹೋಮ ಮಾಡಬೇಕಾಗಿರುವುದರಿಂದ ಅಲ್ಲಿ ಭೂಮಿಯನ್ನು ಸ್ವಚ್ಛಗೊಳಿಸಿ ನಂತರ ಭೂಮಿಯನ್ನು ಸಮತಟ್ಟು ಮಾಡಬೇಕೆಂದರು.  ಈ ಹೋಮ ಮಾಡುತ್ತಿರುವುದು ರಾಜನಿಗಾದ್ದರಿಂದ ಇದನ್ನು ಯಾರ ಸಹಾಯವೂ ಇಲ್ಲದೇ ರಾಜನೇ ಈ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಮತ್ತೆ ಮೂರುದಿನಗಳು ಕಳೆವ ಹೊತ್ತಿಗೆ ಹೋಮದ ಜಾಗ ಸಿದ್ಧಗೊಂಡಿತ್ತು.  ಅಲ್ಲಿಯವರೆಗೆ ಒಟ್ಟು ಆರು ದಿನಗಳು ಕಳೆದಿದ್ದವು.  ಮರುದಿನವೇ ಹೋಮ ಎಂದು ರಾಜ ಹರ್ಷಗೊಂಡ.  ಮರುದಿನ ಬೆಳಿಗ್ಗೆ ಆ ಸನ್ಯಾಸಿಗಳನ್ನು ಹೋಮದ ಬಗ್ಗೆ ಕೇಳಿದ.  ಅವರು ಹೋಮ ಮಾಡುವುದಿಲ್ಲ ಎಂದರು.  ರಾಜನ ಪಿತ್ತ ನೆತ್ತಿಗೇರಿತು.  ಅವನ ಹಾರಾಟ, ಕೂಗಾಟಗಳೆಲ್ಲಾ ಮುಗಿದ ಮೇಲೆ ವೃದ್ಧ ಸನ್ಯಾಸಿಗಳು ರಾಜನಿಗೆ ನಿನ್ನ ಸಮಸ್ಯೆ ಪರಿಹಾರವಾದ ಮೇಲೆ ಹೋಮವೇತಕ್ಕೆ ಎಂದರು.
ರಾಜ ಚಕಿತಗೊಂಡ.  ಈಗ ಎಲ್ಲವೂ ಅವನ ಅರಿವಿನ ಪರಿಧಿಯೊಳಗೆ ಗೋಚರಿಸತೊಡಗಿದವು.  ಹೌದು, ಕಳೆದ ಮೂರು ದಿನಗಳಿಂದ ತನಗೆ ಚೆನ್ನಾಗಿ ಹಸಿವೆಯಾಗುತ್ತಿದೆ.  ಯಾವ ಆಹಾರ ಕೊಟ್ಟರೂ ಅದರ ರುಚಿ ನಾಲಿಗೆಗೆ ದಕ್ಕುತ್ತಿದೆ!  ಒರಟು ನೆಲದ ಮೇಲೆ ಮಲಗಿದರೂ ನೆಲಕ್ಕೆ ಮೈಯಿಟ್ಟ ಮರುಗಳಿಗೆಯೇ ಗಾಢವಾದ ನಿದ್ರೆ ಬರುತ್ತಿದೆ.  ಸೂರ್ಯೋದಯದ ಸಮಯದಲ್ಲಿ ಹಕ್ಕಿಗಳು ಚಿಲಿಪಿಲಿಗುಟ್ಟುವವರೆಗೂ ಎಚ್ಚರಿಕೆಯೇ ಆಗುವುದಿಲ್ಲ!
ಆಗ ಆ ಸನ್ಯಾಸಿಗಳು ರಾಜನಿಗೆ ಹೀಗೆಂದರು-ರಾಜನ್, ಸೌಲಭ್ಯಗಳ ಬೆಲೆಯೇನೆಂದು ತಿಳಿಯದಿದ್ದರೂ, ಯೋಗ್ಯತೆ ಇಲ್ಲದಿದ್ದರೂ ಸೌಲಭ್ಯಗಳನ್ನು ಅನುಭವಿಸುತ್ತಿದ್ದೆ.  ಇದೇ ನೀನು ಮಾಡುತ್ತಿದ್ದ ಪಾಪ.  ಹಸಿವಾಗದೆ ತಿನ್ನುವುದರಿಂದ ಊಟದ ಬೆಲೆ ಗೊತ್ತಾಗುವುದಿಲ್ಲ.  ದೇಹಕ್ಕೆ ದಣಿವಾಗದೇ ಹೋದರೆ ನಿದ್ರೆಯ ಬೆಲೆ ಗೊತ್ತಾಗುವುದಿಲ್ಲ.  ಈ ಒಂದು ವಾರದಲ್ಲಿ  ಈ ಸತ್ಯದ ಸಾಕ್ಷಾತ್ಕಾರ  ಇಲ್ಲಿ ನಿನಗೆ ಆಗಿದೆ ಎಂದು ಭಾವಿಸಿದ್ದೇನೆ.
ಇದು ನಾನು ಬಹಳ ಹಿಂದೆ ಕೇಳಿದ್ದೋ, ಓದಿದ್ದೋ ಕಥೆ.  ರಾಜನ ಜಾಗದಲ್ಲಿ ನಮ್ಮನ್ನೂ, ಆ ವೃದ್ಧ ಸನ್ಯಾಸಿಯ ಜಾಗದಲ್ಲಿ ಬದುಕು ಎಂಬ ಮೇಷ್ಟ್ರನ್ನೂ ಭಾವಿಸಿಕೊಂಡು ಮತ್ತೊಮ್ಮೆ ಈ ಕತೆಯನ್ನು ಓದಿದರೆ ನಮಗೂ ರಾಜನ ಹಾಗೆ ಸತ್ಯದ ಸಾಕ್ಷಾತ್ಕಾರವಾಗುತ್ತದೆ ಅಂದಿದ್ದರು ಹಿರಿಯರೊಬ್ಬರು.  ಹೌದಾ....!!
(ದಿನಾಂಕ ೨೯/೬/೨೦೧೪ರಂದು ಬರೆದ ಲೇಖನ)

No comments:

Post a Comment