Thursday, 4 December 2014

ಬಳ್ಳಿಗೇಕೆ ಹೂ ಭಾರವಾಗುತ್ತಿದೆ?
-ಇ.ಕೆ.ರಾಮಮೋಹನ
ಬಳ್ಳಿಗೆ ಹೂವಾಗಲೀ, ಕಾಯಾಗಲೀ ಭಾರವಲ್ಲ; ಹಾಗೆಯೇ ತಂದೆತಾಯಂದಿರಿಗೆ ಮಕ್ಕಳು ಭಾರವಲ್ಲ-ಇದು ನಮ್ಮ ಪೂರ್ವಜರ ದೃಷ್ಟಿಕೋನ.  ಮಕ್ಕಳಿರಲವ್ವ ಮನೆತುಂಬ ಎಂದು ಜಾನಪದ ಗರತಿ ಹಾಡಿದರೆ,  ಹತ್ತು ಮಕ್ಕಳನ್ನು ಹೆತ್ತು ನಿನ್ನ ಪತಿಯನ್ನು ಹನ್ನೊಂದನೆಯ ಮಗುವಿನಂತೆ ಕಾಣು ಎಂದು ವಿವಾಹದದ ಸಮಯದಲ್ಲಿ ಮದುವೆಣ್ಣಿಗೆ ಆಶೀರ್ವಾದ ಮಾಡುತ್ತಿದ್ದರು.  ಮೂರೋ, ನಾಲ್ಕೋ ಮಕ್ಕಳಿದ್ದರೆ ಅಂತಹ ದಂಪತಿಗಳ ಬಗ್ಗೆ ಪಾಪ, ಅವರಿಗೆ ನಾಲ್ಕೇ ಮಕ್ಕಳು ಎಂದು ಮರುಗುತ್ತಿದ್ದರು.
ಆದರೆ ಈಗ ಕಾಲ ಬದಲಾಗಿದೆ.  ಹಿಂದೆ ಭಿಕ್ಷುಕರಿಗೆ ತಂಗಳನ್ನ (ಕೆಲವೊಮ್ಮೆ ಬಿಸಿ ಅನ್ನ, ಸಾರು ಕೂಡ) ಕೊಡುತ್ತಿದ್ದ ನಾವು ಈಗ ಕೇಜಿ ಅಕ್ಕಿಗೆ ಐವತ್ತು ರೂಪಾಯಿ, ಬೇಳೆ ಕೇಜಿಗೆ ಎಪ್ಪತ್ತೈದು ರೂಪಾಯಿ ಎಂದು ತಂಗಳನ್ನು ತಂಗಳು ಪೆಟ್ಟಿಗೆಯಲ್ಲಿ (ಶಿಷ್ಟ ಭಾಷೆಯಲ್ಲಿ ಇದನ್ನೇ ಫ಼್ರಿಡ್ಜ್ ಎನ್ನುತ್ತೇವೆ!) ಇಟ್ಟುಕೊಂಡು ತಿನ್ನುತ್ತೇವೆ.  
೭೦ರ ದಶಕದ ಕುಟುಂಬ ಯೋಜನೆಯ ಘೋಷವಾಕ್ಯ (ಸ್ಲೋಗನ್) ಒಂದು ಎರಡು ಬೇಕು; ಮೂರು ಮಕ್ಕಳು ಸಾಕು ಎಂದಾಗಿತ್ತು.  ನಂತರ ಇದು ಆರತಿಗೊಂದು (ಹೆಣ್ಣುಮಗು), ಕೀರುತಿಗೊಂದು (ಗಂಡುಮಗು) ಎಂದಾಯಿತು.  (ಹೆಣ್ಣುಮಕ್ಕಳು ಆರತಿ ಎತ್ತಲು ಮಾತ್ರ ಲಾಯಕ್ಕು , ಕೀರುತಿ ತರಲು ಅಲ್ಲ ಎಂಬುದು ಅದ್ಯಾವ ಬುದ್ಧಿವಂತ ಮಹಾಶಯನಿಗೆ ಆದ ಜ್ಞಾನೋದಯವೋ ಗೊತ್ತಿಲ್ಲ!!).  ಮುಂದೆ ಇದೇ ಘೋಷವಾಕ್ಯವು ಊರಿಗೊಂದು ವನ; ಮನೆಗೊಂದು ಮಗು ಎಂದಾಗಿದೆ.  `ಕಾಲಜ್ಞಾನ'ವುಳ್ಳ ಕೆಲವು ಕುಹಕಿಗಳ  ಪ್ರಕಾರ ಮುಂದೆ ಇದು ಬಡಾವಣೆಗೊಂದೇ ದೀಪ; ಬೀದಿಗೊಂದೇ ಪಾಪ ಎಂದು ಬದಲಾಗುವ ಸಂಭವ ಇದೆಯಂತೆ!
ಈ ಲಹರಿಗೆ ಕಾರಣ ಪತ್ರಿಕೆಯಲ್ಲಿ ಓದಿದ ಸುದ್ದಿ ಮತ್ತು ನಿತ್ಯವೂ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನ.  ಸಾಮಾಜಿಕ ವ್ಯವಸ್ಥೆಯಲ್ಲಿ ನಾವು ಮಾಡಿಕೊಂಡಿರುವ ಬದಲಾವಣೆಗೆ ಹೆಣ್ಣು ಬೆಲೆ ತೆರುವುದಿರಲಿ, ಪ್ರಪಂಚವನ್ನು ನೋಡದ ಹೆಣ್ಣು ಭ್ರೂಣವೂ ಬೆಲೆ ತೆರುತ್ತಿದೆ.
ಚಾಮರಾಜನಗರ ಜಿಲ್ಲೆಯ ಕೆಲವು ಲಂಬಾಣಿ ತಾಂಡಾಗಳಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ.  ಇದಕೆ ಕಾರಣ ಹೆಣ್ಣನ್ನು ಸಾಕಿ, ಬೆಳೆಸಿ, ವರದಕ್ಷಿಣೆ ಕೊಟ್ಟು ಮದುವೆ ಮಾಡಲಾಗಲು ಆಗದ ಬಡತನ.  ಆದರೆ ಈ ಸಮಸ್ಯೆ ವಿವಿಧ ರೀತಿಗಳಲ್ಲಿ ವಿಸ್ತರಿಸಿಕೊಂಡಿದೆ.
ಗಂಡುಸಂತಾನದ ಬಗ್ಗೆ ಇರುವ ವ್ಯಾಮೋಹ ಒಂದು ಕಡೆ. ಹೆಣ್ಣು ಮಕ್ಕಳನ್ನು ಬೆಳೆಸಲು,  ಓದಿಸಲು ಸಾಕಷ್ಟು ಖರ್ಚಾಗುತ್ತದೆ.  ಇದರ ಜೊತೆಗೆ ಮದುವೆಯ ಖರ್ಚು ಬೇರೆ (ಅಂದರೆ ಇನ್‌ವೆಸ್ಟ್‌ಮೆಂಟ್‌ಗೆ ಏನೂ ರಿಟರ್ನ್ಸ್ ಇಲ್ಲ ಎಂಬ ವ್ಯಾವಹಾರಿಕ ಬುದ್ಧಿವಂತಿಕೆಯ(!?) ಭಾವನೆ ಇದು).  ಜೊತೆಗೆ ವಯಸ್ಸಿಗೆ ಬರುತ್ತಿರುವ, ಬಂದ ಹೆಣ್ಣುಮಕ್ಕಳು ಎಂದರೆ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದ ಹಾಗೆ ಎಂಬ ಭಾವನೆ-ಇವು ಹೆಣ್ಣುಸಂತಾನದ ಬಗ್ಗೆ ಋಣಾತ್ಮಕ ಭಾವನೆ ಬೆಳೆಯುವಲ್ಲಿ ಇರುವ ಕೆಲವು ಪ್ರಮುಖ ಕಾರಣಗಳು.
ಹೆಣ್ಣುಶಿಶುವಿನ ಮಾರಾಟದಷ್ಟೇ ಕಳವಳಕಾರಿಯಾದ ಮತ್ತೊಂದು ವಿಚಾರವೆಂದರೆ ಹೆಣ್ಣುಭ್ರೂಣದ ಹತ್ಯೆ.  ಮಗು ಗರ್ಭದಲ್ಲಿ ಇರುವಾಗಲೇ ಹೆಣ್ಣೆಂದು ಅದನ್ನು ಕೊಲ್ಲುವ ಪರಮ ನೀಚತನ ಇದು.  ಇದಕ್ಕೂ ಕಾರಣ ಈ ಮೇಲೆ ಹೇಳಿರುವಂತಹುದೆ.
ಭ್ರೂಣದ ಲಿಂಗ ಪತ್ತೆ ಮಾಡುವುದು ಮತ್ತು ಹೆಣ್ಣುಭೂಣವಾಗಿದ್ದರೆ ಗರ್ಭಪಾತದ ಮೂಲಕ ಅದನ್ನು ಇಲ್ಲವಾಗಿಸುವ ದಂಧೆಯು ಭಾರತದಲ್ಲಿ ಒಂದುಸಾವಿರ ಕೋಟಿ ರೂ.ಗಳ ಬೃಹತ್ ವಹಿವಾಟಾಗಿದೆ ಎಂದು ವರದಿಯೊಂದು ಹೇಳುತ್ತದೆ.  ೧೯೯೦ರಲ್ಲಿ ಭಾರತದಾದ್ಯಂತ ಅಲ್ಟ್ರಾಸೌಂಡ್ ತಂತ್ರಜ್ಞಾನ ಬಳಕೆಗೆ  ಬಂದಾಗಲಿಂದ ಈ ಸಮಸ್ಯೆ ಆರಂಭವಾಯಿತು.  ೧೯೯೪ರಿಂದ ನಮ್ಮ ದೇಶದಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಲಾಗಿದೆ.  ೨೦೦೩ರಲ್ಲಿ ಈ ಕಾನೂನಿಗೆ ತಿದ್ದುಪಡಿ ತಂದು ಪೋಷಕರು, ಭ್ರೂಣದ ಹತ್ಯೆಗೆ ಒತ್ತಾಯಿಸುವವರನ್ನು ಮಾತ್ರವಲ್ಲದೇ ಸಂಬಂಧಿಸಿದ ವೈದ್ಯಕೀಯ ವೃತ್ತಿಯವರನ್ನೂ ಸಹಾ ಹೊಣೆಗಾರರನ್ನಾಗಿ ಮಾಡಲಾಗಿದೆ.
ಕೆನಡಾದ ಲಾನ್ಸೆಟ್ ಜರ್ನಲ್‌ನ ಸಂಶೋಧಕರ ಪ್ರಕಾರ ಹೆಣ್ಣು ಭ್ರೂಣ ಎಂಬ ಕಾರಣಕ್ಕಾಗಿಯೇ ಪ್ರತಿವರ್ಷ ಭಾರತದಲ್ಲಿ ೫ಲಕ್ಷ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ.  ಇದರಿಂದಾಗಿ ೧೯೯೧ರಿಂದ ಭಾರತದ ಶೇ.೮೦ರಷ್ಟು ರಾಜ್ಯಗಳಲ್ಲಿ ಪುರುಷರ ಸಂಖ್ಯೆಯಲ್ಲಿ ತೀವ್ರವಾದ ರೀತಿಯಲ್ಲಿ ಏರಿಕೆಯಾಗುತ್ತಿದೆ.
ಆರು ವರ್ಷಗಳವರೆಗಿನ ಮಕ್ಕಳ ಲಿಂಗ ಅನುಪಾತದಲ್ಲಿ (ಸೆಕ್ಸ್ ರೇಷಿಯೊ) ಆಗಿರುವ ಬದಲಾವಣೆ ಹೀಗಿದೆ:
೧೯೮೧-೧೦೦ ಹೆಣ್ಣುಗಳಿಗೆ ೧೦೪ ಗಂಡುಗಳು
೧೯೯೧-೧೦೦ ಹೆಣ್ಣುಗಳಿಗೆ ೧೦೭.೮ ಗಂಡುಗಳು
೨೦೧೧-೧೦೦ ಹೆಣ್ಣುಗಳಿಗೆ ೧೦೯.೪ ಗಂಡುಗಳು
ಭ್ರೂಣ ಹತ್ಯೆ ಹೆಚ್ಚಾಗಿರುವ  ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಲಿಂಗಾನುಪಾತವು ಕ್ರಮವಾಗಿ ೧೦೦ ಹೆಣ್ಣುಗಳಿಗೆ ೧೨೬.೧ ಗಂಡುಗಳು  ಮತ್ತು ೧೨೨ ಗಂಡುಗಳು ಇವೆ.  ಇದೇ ಕಾರಣದಿಂದಾಗಿ ಹರಿಯಾಣದ ಯುವಕರು ಸಾವಿರಾರು ಕಿಲೋಮೀಟರುಗಳು ಬಂದು ಕೇರಳದ ಹೆಣ್ಣುಗಳನ್ನು ಮದುವೆಯಾಗುತ್ತಿದ್ದಾರೆ.
ವಿದ್ಯಾವಂತ ಕುಟುಂಬಗಳಲ್ಲಿ ಈ ಮನೋಭಾವ ನಿಧಾನವಾಗಿ ಕಡಿಮೆಯಾಗುತ್ತಿದೆ.  ಆದರೆ ಅವಿದ್ಯಾವಂತ ಅಥವಾ ಹೆಚ್ಚು ವಿದ್ಯಾವಂತರಲ್ಲದ ಕುಟುಂಬಗಳಲ್ಲಿ ಈ ಮನೋಭಾವ ಇನ್ನೂ ದಟ್ಟವಾಗಿಯೇ ಇದೆ.  ಸುಮಾರು ಹದಿಮೂರು ವರುಷಗಳ ಹಿಂದೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪೋಷಕರೊಬ್ಬರು ಏಳನೆಯ ತರಗತಿಯವರೆಗೆ ನಮ್ಮ ಶಾಲೆಯಲ್ಲೇ ಓದಿದ್ದ ಅವರ ಮಗಳನ್ನು ಎಂಟನೆಯ ತರಗತಿಗೆ ನಮ್ಮ ಪ್ರೌಢಶಾಲೆಗೆ ಸೇರಿಸದೆ ಸರ್ಕಾರಿ ಶಾಲೆಗೆ ಸೇರಿಸಲು ಬಯಸಿದರು.  ಅದರೆ ಆ ವಿದ್ಯಾರ್ಥಿನಿಗೆ ಅದು ಇಷ್ಟವಿರಲಿಲ್ಲ.  ಆ ಪೋಷಕರನ್ನು ಕರೆದು ವಿಚಾರಿಸಿದಾಗ ಅವರು ಖಡಕ್ಕಾಗಿ ಹುಡುಗಿಗೆ ಯಾಕೆ ಸಾರ್ ಪ್ರೈವೇಟ್ ಸ್ಕೂಲು? ಸುಮ್ಮನೆ ಖರ್ಚು ಎಂದರು.  ಕೊನೆಗೂ ಅಂದು ನಮ್ಮ ಕಾರ್ಯದರ್ಶಿಯವರಾಗಿದ್ದ ದಿ. ಜಾವಿದ್ ಅಹಮದ್ ಅವರ ಒತ್ತಾಯಕ್ಕೆ ಮಣಿದು ಸೇರಿಸಿದರು.  ಹತ್ತನೆಯ ತರಗತಿಯ ನಂತರ ಅವಳ ಓದನ್ನೇ ನಿಲ್ಲಿಸಬೇಕೆಂದು ಅವರು ಬಯಸಿದ್ದರು.  ಇದಕ್ಕೆ ಕಾರಣ ನಾನು ಆಗಲೇ ಹೇಳಿರುವ ಓನ್ಲಿ ಇನ್‌ವೆಸ್ಟ್‌ಮೆನ್ಟ್, ನೋ ರಿಟರ್ನ್ಸ್ ಎಂಬ ಫಿಲಾಸಫಿ!  ಆದರೆ ಸುದೈವವಶಾತ್ ಆ ಹುಡುಗಿ ಬಿ.ಇ. ಮುಗಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸದಲ್ಲಿ ಇದ್ದಾಳೆ. 
ಮುಗಿಸುವ ಮೊದಲು ಸಂಚಿಯ ಹೊನ್ನಮ್ಮನ ಮಾತನ್ನು ನೆನಪಿಸಿಕೊಳ್ಳುತ್ತೇನೆ.  ಸಂಚಿ ಹೊನ್ನಮ್ಮ ಚಿಕ್ಕದೇವರಾಜಒಡೆಯರ ಅರಮನೆಯ ಸಂಚಿ ಊಳಿಗದವಳು .  ಆಸ್ಥಾನದ ಪ್ರಸಿದ್ಧ ಕವಿ ಸಿಂಗರಾರ್ಯನ ಶಿಷ್ಯೆ.  ಈಕೆ ಹದಿಬದೆಯ (ಪತಿವ್ರತೆಯ) ಧರ್ಮ ಎಂಬ ಕೃತಿಯನ್ನು ಬರೆದಿದ್ದಾಳೆ.  ೪೬೮ ಪದ್ಯಗಳಿರುವ ಈ ಕೃತಿ ಸಾಂಗತ್ಯ ಛಂದಸ್ಸಿನಲ್ಲಿದೆ.  ಅವಳ ವಿವೇಕದ ಮಾತು ಹೀಗಿದೆ:
ಪೆಣ್ಣಲ್ಲವೆ ತಮ್ಮನೆಲ್ಲ ಪಡೆದ ತಾಯಿ | ಪೆಣ್ಣಲ್ಲವೆ ಪೊರೆದವಳು
ಪೆಣ್ಣುಪೆಣ್ಣೆಂದೇಕೆ ಬೀಳುಗಳೆವರು | ಕಣ್ಣುಕಾಣದ ಗಾವಿಲರು
ಹೊನ್ನಮ್ಮಳ ತಿಳಿವಳಿಕೆಯಲ್ಲಿ ಸಾಸಿವೆಯಷ್ಟಾದರೂ ತಿಳಿವಳಿಕೆ ನಮಗೆ ಬಂದರೆ ಅದೆಷ್ಟು ಚೆನ್ನ.  ಅಲ್ಲವೇ?
(ದಿನಾಂಕ ೦೨/೧೦/೨೦೧೪ ರಂದು ಬರೆದ ಲೇಖನ)

No comments:

Post a Comment